Tuesday, December 26, 2017

ಓದುವ ಮನಸ್ಸಾದರೆ... ಮೌನ ಮುರಿಯುವ ಕಾಲ ಬಂದರೆ...

ನನಗೆ ಇದು ಸರಿಯೋ, ತಪ್ಪೋ ಗೊತ್ತಿಲ್ಲ. ಒಂದಷ್ಟು ಹೊತ್ತು ಕುಂತು ಯೋಚಿಸಿದರೆ ಸರಿ ತಪ್ಪುಗಳು ಯಾವುದು ಎಂದು ತಿಳಿಯಲೂ ಬಹುದು. ಎರಡು ಮನಸ್ಸು ತಿಳಿಯಾಗಬಹುದು. ಆದರೆ ಅಷ್ಟು ಸಮಯ ಸುಮ್ಮನೆ ಕುಳಿತು ಪರಸ್ಪರರ ಬಗ್ಗೆ ಮಾಪನ ಮಾಡಿಕೊಳ್ಳುವುದೇ ಆರ್ಥಹೀನ ಎಂಬ ತಿರುವು ತೆಗೆದುಕೊಂಡು ನಾವುಗಳು ನಮ್ಮ ದಾರಿಯಲ್ಲಿ ಸಾಕಷ್ಟು ಸಾಗಿದ್ದೇವೆ. ಈಗಲೂ ಅಷ್ಟೇ, ನಮಗೆ ನಮ್ಮ ಆಳ ಅಗಲಗಳ ಅರಿವು ಬೇಕಿಲ್ಲ

ಇದು ನನ್ನ ನಿನ್ನ ಸೋಲು ಗೆಲುವಿನ ಪ್ರಶ್ನೆಯಲ್ಲ. ಅನಿವಾರ್ಯತೆ, ಅಗತ್ಯಗಳ ಸುಳಿವು ಕೂಡ ಇಲ್ಲಿ ಇಲ್ಲ. ನಾನು ನಿನ್ನ ಜೊತೆ ಮಾತನಾಡುತ್ತಿಲ್ಲ, ನೀನು ನನ್ನ ಜೊತೆ ಮಾತು ಬಿಟ್ಟಿದ್ದಿ. ನನಗೆ ಅಷ್ಟೆ  ಗೊತ್ತಿರುವುದು. ದ್ವೇಷ, ಕೋಪ, ಹಠ ಅಂತಹದ್ದೇನು ನನ್ನಲ್ಲಿ ಇಲ್ಲ. ಅಥವಾ ಅದನ್ನು ಇಟ್ಟುಕೊಳ್ಳುವಷ್ಟು ಮೂರ್ಖ ನಾನಲ್ಲ.

ಇದಕ್ಕೆ ಕಾರಣ ಏನು, ನಿಜವಾಗಿಯೂ ಕಾರಣವಿದೆಯಾ ಇರುವ ಕಾರಣ ನಾವು ಪರಸ್ಪರ ಮಾತು ಬಿಡುವಂತೆ ಮಾಡುವಷ್ಟು ಪ್ರಬಲವಾಗಿದೆಯಾ, ಅಥವಾ ಸಲ್ಲದ ಇಗೋದ ಗೋಡೆ ಒಂದಷ್ಟು ಎತ್ತರ ಬೆಳೆದು ಮಾತಿನ ಮಾಲೆಯನ್ನು ತುಂಡು ಮಾಡಿದೆಯಾ, ಗೋಡೆಯ ಬುಡದ ಕತ್ತಲಿಗೆ ನಮ್ಮ ದಿನಗಳ ಪ್ರೀತಿ, ಸ್ನೇಹ, ವಿಶ್ವಾಸದ ದೀಪವೇ ಕಾರಣವೋ ಎನ್ನುವ ಪ್ರಶ್ನಾರ್ಥಕ ಚಿಹ್ನೆಗಳು ನಾನು, ನೀನು ಒಮ್ಮೆ ಕೇಳಿಕೊಳ್ಳಲೇ ಬೇಕಿತ್ತು

ಆದರೆ ನನಗೆ ಅಚ್ಚರಿಯ ಚಿಹ್ನೆಯ ಮೇಲೆಯೇ ಒಲವು ಜಾಸ್ತಿ. ಅರೆ ಕ್ಷಣ ಯೋಚಿಸಿದರೂ ಸಾಕು ನಾವು ಗೆಳೆಯರದ್ದದ್ದೇ ದೊಡ್ಡ ಅಚ್ಚರಿ. ನಾವಿಬ್ಬರು ಗ್ರೇಟ್ ಫ್ರೇಂಡ್ಸ್ ಆಗಿದ್ದೇಯೋ, ಇಲ್ಲವೋ. ಆದರೆ ಒಂದಷ್ಟು ಗುಣಮಟ್ಟದ ಸಮಯವನ್ನು ನಾವು ನಮ್ಮ ಕಾಲೇಜು ಜೀವನದಲ್ಲಿ ಒಟ್ಟಿಗೆ ಪಡೆದುಕೊಂಡಿದ್ದೇವೆ ಎಂಬುದು ಅಲ್ಲಗಳೆಯಲಾಗದ ವಿಷಯ

ಅಂದಿನ ದಿನಗಳಲ್ಲಿಯೂ ನಾವು ಒಮ್ಮೆ ಮಾತು ಬಿಟ್ಟಿದ್ದೆವು. ಕೆಲವು ತಿಂಗಳುಗಳ ಕಾಲ ಮಾತೇ ಆಡಿರಲಿಲ್ಲ. ಆದರೆ ಅಲ್ಲಿನ ಪರಿಸ್ಥಿತಿ ನಮ್ಮನ್ನು ಮಾತನಾಡಲೇ ಬೇಕಾದ ಅನಿವಾರ್ಯತೆಗೆ ಸಿಳುಕಿಸಿತ್ತು. ಆದರೆ ಈಗ ನಮಗೆ ಅಂತಹ ಯಾವುದೇ ಕಟ್ಟುಪಾಡುಗಳಿಲ್ಲ. ಒಂದು ವೇಳೆ, ಇದ್ದಿದ್ದರೆ ನಾವು ಮತ್ತೆ ಅದೇಷ್ಟೋ ಬಾರಿ ಮಾತನಾಡುತ್ತಾ, ಮಾತು ಬಿಡುತ್ತಾ ಇರುತ್ತಿದ್ದೇವೇನೋ. ಅರು ಸುದೀರ್ಘ ವರ್ಷದಲ್ಲಿ ನೂರಾರು ಬಾರಿಯಾದರೂ...!? 

ನನ್ನ ಜಿಮೇಲ್ನಲ್ಲಿ ಮೆಮೋರಿ ಫುಲ್ ಆಗುತ್ತಿದೆ ಎಂದು ನಾನು ನನ್ನ ಹಳೆಯ ಮೇಲ್ಗಳನ್ನು ಡಿಲೀಟ್ ಮಾಡುತ್ತಿದ್ದೆ. ನೀನು 9 ವರ್ಷಗಳ ಹಿಂದೆ ಕಳುಹಿಸಿದ್ದಮೇಲ್ ನನ್ನನ್ನು ಅರೆ ಕ್ಷಣ ತಡೆದು ನಿಲ್ಲುವಂತೆ ಮಾಡಿತ್ತು ( ಮೇಲ್ ಜೊತೆಗೆ ಟಿಪ್ಪಣಿಯನ್ನು ನಿನಗೆ ಕಳುಹಿಸುತ್ತಿದ್ದೇನೆ). ನಾನು ಒಂದು ವೇಳೆ ಇದನ್ನು ಡಿಲೀಟ್ ಮಾಡಿ ಬಿಟ್ಟರೆ ನಿನ್ನ ಹೆಸರಿನ ಎಲ್ಲ ಡಿಜಿಟಲ್ ದಾಖಲೆಗಳು ನನ್ನಿಂದ ಅಳಿಸಿಹೋಗಲಿದೆ. ಅಷ್ಟೇ ತಾನೆ, ನಿನಗಿಂತ ಅದೋಷ್ಟೋಗ್ರೇಟ್ಫ್ರೇಂಡ್ಗಳನ್ನು ಸಂಪಾದಿಸಿದ್ದೇನೆ, ಈಕೆಯೊಬ್ಬಳು ಇದ್ದದ್ದೆ ನನಗೆ ಈಗ ನೆನಪಾಗಿದ್ದು ಎಂದು ಒಮ್ಮೆ ಅನಿಸಿತ್ತು ನನಗೆ. ನಿಜ. ಆದರೆ ಒಳಗೆ ಏನೇನಿದೆ ಎಂದು ನೊಡೋಣ ಎಂದು ಕೊಂಡು ಮೇಲ್ ತೆರೆದರೆ... ಗೆಳೆತನದ ತರಹೇವಾರಿ ವ್ಯಾಖ್ಯಾನಗಳು. ವ್ಯಾಖ್ಯಾನಗಳು ನಿಜವೋ, ಸುಳ್ಳೋ... ಆದರೆ 9 ವರ್ಷಗಳ ಹಿಂದೆ ನಿನಗೆ ನನ್ನ ಮೇಲೆ ನಿರೀಕ್ಷೆ, ವಿಶ್ವಾಸವಿತ್ತು ಎಂಬುದಕ್ಕೆ ಅದನ್ನು ನೀನು ಯಾರಿಗೆಲ್ಲ ಕಳುಹಿಸಿದ್ದೆ ಎಂಬ ವಿಳಾಸವನ್ನ ಕಂಡಾಗ ಸ್ಪಷ್ಟವಾಯಿತು. ಸೋ ಒಂದು ನಿಟ್ಟುಸಿರು ಬಿಟ್ಟೆ. ವಿಶ್ವಾಸ ನಾನು ಉಳಿಸಿಕೊಂಡಿದ್ದೀನೋ...ಇಲ್ಲವೋ.

ಮುಗ್ದರಾಗಿರುವಾಗ ಕಣ್ಣ ಮುಂದಿರುವುದೇ ಖುಷಿ ಕೊಡುತ್ತದೆ. ಮುಗ್ದತೆ ಕಳೆದುಕೊಳ್ಳುತ್ತಾ ಸಾಗುತ್ತಿದ್ದಂತೆ ಕಣ್ಣ ಮುಂದಿರುವುದರ ಜೊತೆಗೆ ಭವಿಷ್ಯ, ಕಾಲ, ಸಂದರ್ಭ, ಪರಿಸ್ಥಿತಿಗಳ ಲೆಕ್ಕಾಚಾರ ನಮ್ಮ ಖುಷಿಯನ್ನು ನಿರ್ಧರಿಸುತ್ತದೆ. ಆದರೆ ಇಂತಹ ಲೆಕ್ಕಾಚಾರಗಳ ಸುಳಿಗೆ ಸಿಳುಕಿದಾತ ಎಂದಿಗೂ ಖುಷಿಯಾಗಿರಲಾರ. ನನ್ನ ಮುಂದೆ ನಿನ್ನ ಮೇಲ್ ಇತ್ತು. ನಾವು ಬೇರೆ ದಾರಿಯ ಪಯಣಿಗರು ಎಂದು ಗೊತ್ತಿತ್ತು. ಆದರೆ ಒಂದು ಪ್ರಬುದ್ಧ ಸಂಬಂಧ ವಿನಾಕಾರಣ ಸತ್ತುಹೋಗಬಾರದು ಎಂಬ ಏಕೈಕ ಉದ್ದೇಶದಿಂದ ...

ಈಗ ನೆನಪಾಯಿತು ನೋಡು... ನೀನು ನನ್ನ ಅಟೋಗ್ರಾಫ್ನಲ್ಲಿ ಬರೆದಿದ್ದೆ... ನಾವು ಇನ್ನೂ ಯಾವ ಕಾರಣಕ್ಕೂ ಗಲಾಟೆ ಮಾಡಿಕೊಂಡು ಮಾತು ಬಿಡಬಾರದು ಎಂದು. ಆದರೆ ನಮಗೆ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಹೋಯಿತು. ನನ್ನ ಮತ್ತು ನಿನ್ನ ವ್ಯಕ್ತಿತ್ವವನ್ನು ವಿಮರ್ಶಿಸಿದರೆ ಅದಕ್ಕೆ ಕಾರಣ ತಿಳಿದು ಬಿಡುತ್ತದೆ. ಆದರೆ ನಮಗೆ ಅದು ಈಗ ಬೇಕಾಗಿಲ್ಲ ಎಂದು ನನ್ನ ಅನಿಸಿಕೆ

... ಜೀವನ ದೊಡ್ಡದಿದೆ, ಸುಂದರವಿದೆ. ನಿನಗೆ ನನ್ನ, ನನಗೆ ನಿನ್ನ ನಂಟಿಲ್ಲದಿದ್ದರೂ ನಮ್ಮ ನೆಮ್ಮದಿಯ ಗಂಟು ಕರಗಲಾರದು. ಅನೇಕ ಸಂಬಂಧಗಳು ಯಾವುದೋ, ಯಾರದೋ ಚಿತಾವಣೆಗೆ ಬಲಿಯಾಗುತ್ತವೆ. ಆದರೆ ಅಂದಿನ ದಿನಗಳಲ್ಲಿ ಒಂದೇ ಬುತ್ತಿ ಹಂಚಿಕೊಂಡು ತಿಂದುಸಂಬಂಧ ಕಟ್ಟಿದ್ದು ಅದು ಯಾರದ್ದೋ ಚಿತಾವಣೆಗೆ ಸಮಾಧಿಯಾಗಲೆಂದೋ

ನಾವು ಮತ್ತೆ ಮಾತನಾಡಬೇಕು, ಒಂದಾಗಬೇಕು ಎನ್ನುವುದು ನನ್ನ ಒತ್ತಾಯವಲ್ಲ. ನನ್ನ ಬಗ್ಗೆ, ನಮ್ಮ ಗೆಳೆತನದ ಬಗ್ಗೆ ನಿನ್ನ ಮನಸ್ಸಿನಲ್ಲಿ ಏನಿದೆಯೋ ಅದೂ ಗೊತ್ತಿಲ್ಲ. ನೀನು ಕಳುಹಿಸಿದ್ದ ಮೇಲ್ ಜೊತೆಗೆ ಟಿಪ್ಪಣಿಯನ್ನು ಕಳುಹಿಸುತ್ತಿದ್ದೇನೆ ಅಷ್ಟೆ

ಕಿತ್ತಾಡಿ, ಹೊಡೆದಾಡಿ, ಬೈದಾಡಿಯಾದರೂ ಮಾತು ಬಿಡಬೇಕು. ಮಾತು ಬಿಡಲು, ಅದಕ್ಕೊಂದು ಗಟ್ಟಿ ಕಾರಣ ಕೊಡಲು ನಾವು ಮತ್ತೇ ಮಾತನಾಡುವಂತಾಗಬೇಕು! ಮಾತು ಬಿಡಲು ಕಾರಣವೇ ಸಿಗದೆ ಹೋದರೆ ಮತ್ತೇ ಮೌನಕ್ಕೂ ಮಾತು ಬರಬಹುದು! ಮಾತಿಲ್ಲದ ಮೌನ ಇದ್ದರೂ ಒಂದೇ... ಇಲ್ಲದಿದ್ದರೂ ಒಂದೆ.

ಈಗ ನಾವು ಪರಸ್ಪರ ಇರುವ ಹಾಗೆ...!